ಮಯ -
(1) ತ್ರಿಪುರಾಸುರದಲ್ಲಿ ಒಬ್ಬ, ಮಂಡೋದರಿ ಈತನ ಮಗಳು. ಈತ ಹೇಮೆಯೆಂಬ ಅಪ್ಸರೆಯನ್ನು ಮದುವೆಯಾಗಿದ್ದ. ಈಕೆಯಲ್ಲಿ ಮಯಾವಿ, ದುಂದುಭಿ ಎಂಬ ಈರ್ವರು ಪುತ್ರರನ್ನೂ ಮಂಡೋದರಿ ಎಂಬ ಮಗಳನ್ನೂ ಪಡೆದ. ಹೇಮೆ ಈತನನ್ನು ತೊರೆದು ದೇವಲೋಕಕ್ಕೆ ಹೋದಳು. ಬಳಿಕ ಮಯ ಮಂಡೋದರಿಯನ್ನು ಲಂಕಾಧಿಪತಿ ರಾವಣನಿಗೆ ಕೊಟ್ಟು ಮದುವೆ ಮಾಡಿದ. ಈ ವೃತ್ತಾಂತ ರಾಮಾಯಣದಲ್ಲಿ ಬರುತ್ತದೆ.

(2) ರಾಕ್ಷಸರ ಶಿಲ್ಪಿ. ಖಾಂಡವವನದಲ್ಲಿ ವಾಸವಾಗಿದ್ದ. ಖಾಂಡವವನವನ್ನು ಅಗ್ನಿದೇವ ಭಕ್ಷಿಸುವಾಗ ಈತ ಪ್ರಾಣ ರಕ್ಷಣೆಗಾಗಿ ಅರ್ಜುನನನ್ನು ಮೊರೆಹೊಕ್ಕ. ಅರ್ಜುನನ ಮುಖೇನ ಕೃಷ್ಣನಿಂದಲೂ ಅಭಯ ಪಡೆದ. ತನ್ನ ಕೃತಜ್ಞತೆಯ ಕುರುಹಾಗಿ ಮಯ ಧರ್ಮರಾಜನಿಗೆ ಲೋಕವೇ ಬೆರಗಾಗುವಂಥ ಸಭಾಭವನ ನಿರ್ಮಿಸಿಕೊಟ್ಟ. ಅಷ್ಟೇ ಅಲ್ಲದೆ ಒಂದು ಸರೋವರದಿಂದ ದಿವ್ಯವಾದ ಗದೆ ಹಾಗೂ ದೇವದತ್ತವೆಂಬ ಶಂಖವನ್ನು ತಂದು ಗದೆಯನ್ನು ಭೀಮನಿಗೂ ಶಂಖವನ್ನು ಅರ್ಜುನನಿಗೂ ಕೊಟ್ಟ. ಈ ವೃತ್ತಾಂತ ಮಹಾಭಾರತದ ಸಭಾಪರ್ವದಲ್ಲಿ ಬಂದಿದೆ.
(ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ